ಗಳಗನಾಥ : -
೧೮೬೯-೧೯೪೨. ಕನ್ನಡದ ಹೊಸ ಹುಟ್ಟಿನ ಕಾಲದ ಪ್ರಾರಂಭದಲ್ಲಿ ತಮ್ಮ ವಿಪುಲವಾದ ಕನ್ನಡ ಬರೆವಣಿಗೆಯಿಂದ ಇಡೀ ನಾಡಿನಲ್ಲಿ ಭಾಷಾ ಜಾಗೃತಿಯನ್ನುಂಟುಮಾಡಿದ ಪ್ರಸಿದ್ಧ ಲೇಖಕರಲ್ಲೊಬ್ಬರು. ಇವರ ಪೂರ್ತ ಹೆಸರು ವೆಂಕಟೇಶ ತಿರಕೋ ಕುಲಕರ್ಣಿ ಗಳಗನಾಥ. ವೆಂಕಣ್ಣ, ವೆಂಕಟೇಶ ಎಂಬುದು ಮನೆಯ ಹೆಸರುಗಳು. ಗಳಗನಾಥರು ಧಾರವಾಡ ಜಿಲ್ಲೆಯ ಗಳಗನಾಥ ಎಂಬ ಹಳ್ಳಿಯಲ್ಲಿ ಶಾಲಿವಾಹನ ಶಕವರ್ಷ 1790 ವಿಭವನಾಮ ಸಂವತ್ಸರದ ಪುಷ್ಯಮಾಸದ ಬಹುಳ ಷಷ್ಠಿಯ ದಿನ (5-1-1869) ಹುಟ್ಟಿದರು. ಇವರು ಊರಿನ ಕುಲಕರಣಿಯವರ ಚೊಚ್ಚಲು ಮಗನಾದುದರಿಂದ ಇಡಿಯ ಊರಿನಲ್ಲಿಯೇ ಅಂದು ಒಂದು ದೊಡ್ಡ ಸಂಭ್ರಮ. ತನ್ನಿಮಿತ್ತ ಆ ಊರಿನ ಸ್ವಾಮಿಯಾದ ಗಳಗೇಶ್ವರನ ದೇವಾಲಯದಲ್ಲಿ ವಿಶೇಷ ಪೂಜಾದಿಗಳು ಜರುಗಿದುವು. ಮುಂದೆ ವೆಂಕಣ್ಣನ ಬಾಲ್ಯ ಆ ಪರಿಸರದಲ್ಲಿಯೇ ಕಳೆಯಿತು. ವರದಾ ಹಾಗೂ ತುಂಗಭದ್ರಾ ನದಿಗಳ ಸಂಗಮ ಸ್ಥಾನದ ಹತ್ತಿರ ರಮಣೀಯ ಸ್ಥಳದಲ್ಲಿರುವ ಗಳಗನಾಥದ ಗಳಗೇಶ್ವರ ದೇವಾಲಯವೇ ಇವರ ಪ್ರಥಮ ಪಾಠಶಾಲೆಯಾಯಿತಲ್ಲದೆ ಅಲ್ಲಿ ಇವರಿಗೆ ಅಕ್ಕರೆಯ ಗುರುಕುಲ ಶಿಕ್ಷಣ ದೊರೆಯಿತು. ಇದರಿಂದಾಗಿ ಗಳಗನಾಥರಲ್ಲಿ ಸ್ವಾಭಿಮಾನ, ಸ್ವಭಾಷೆ ಹಾಗೂ ಸಂಸ್ಕøತಿಗಳ ಬಗ್ಗೆ ವಿಶೇಷ ಪ್ರೇಮ ಬೆಳೆದುವು. ಹಾವನೂರಿನಲ್ಲಿ ಮುಲ್ಕಿ ಪರೀಕ್ಷೆ ಮುಗಿಸಿದನಂತರ ಶಿಕ್ಷಕನಾಗಬೇಕೆಂಬ ಹಂಬಲವು ಸ್ವಭಾವತಃ ಇದ್ದುದರಿಂದ ಗಳಗನಾಥರು ಧಾರವಾಡ ಟ್ರೇನಿಂಗ್ ಕಾಲೇಜಿಗೆ ಹೋದರು (1886).

	ಧಾರವಾಡ ಗಳಗನಾಥರು ಜೀವನದಲ್ಲಿ ಮಹತ್ತ್ವದ ಸ್ಥಾನವನ್ನು ಪಡೆದಿದೆ. ಅದು ಇವರನ್ನು ಸಾಹಿತಿಯನ್ನಾಗಿ ರೂಪಿಸಿದ ಕ್ಷೇತ್ರ. ಟ್ರೇನಿಂಗ್ ಕಾಲೇಜಿನ ವಾತಾವರಣ ತುಂಬ ಉತ್ತಮವಾಗಿತ್ತು. ಪಂಡಿತರಾದ ಕಿತ್ತೂರ ಅಯ್ಯನವರು, ಧೋಂಡೋ ನರಸಿಂಹ ಮುಳಬಾಗಿಲ ಅವರು ತಮ್ಮ ಪ್ರಭಾವಬೀರಿ ಗಳಗನಾಥರಿಗೆ ಕನ್ನಡ ಕಲಿಸಿದರು. ಅದೇ ಪ್ರಕಾರ ಪ್ರಭಾವ ಬೀರಿದವರು ರೊದ್ದ ಶ್ರೀನಿವಾಸರಾಯರು ಹಾಗೂ ಕರಂದೀಕರರು. ಕರಂದೀಕರರ ಅಚ್ಚುಕಟ್ಟು, ಶಿಸ್ತು, ಗಳಗನಾಥರ ಸೊತ್ತಾದುವು. ಆ ಸಮಯದಲ್ಲಿ ಅಪ್ರತ್ಯಕ್ಷವಾಗಿ ಇವರ ಜೀವನದಲ್ಲಿ ಪ್ರಭಾವ ಬೀರಿದ ವ್ಯಕ್ತಿಗಳೆಂದರೆ ಮಹಾರಾಷ್ಟ್ರದ ಲೋಕಮಾನ್ಯ ಟಿಳಕ ಹಾಗೂ ಹರಿ ನಾರಾಯಣ ಆಪ್ಟೆ ಅವರು.

	ಆಗ ಉತ್ತರ ಕರ್ನಾಟಕದಲ್ಲಿ ಟಿಳಕ ಹಾಗೂ ಆಪ್ಟೆಯವರ ಹೆಸರುಗಳು ಮನೆಮಾತಾಗಿದ್ದುವು. ಟಿಳಕರ ಕೇಸರಿ, ಆಪ್ಟೆಯವರ ಕರಮಣೂಕ ಪತ್ರಿಕೆಗಳು ಬಹುಪ್ರಚಾರದಲ್ಲಿದ್ದುವು. ಕನ್ನಡ ಪತ್ರಿಕೆಗಳ ಅಭಾವದಿಂದಾಗಿ ಕನ್ನಡಿಗರು ಮರಾಠಿ ಪತ್ರಿಕೆಗಳನ್ನೇ ಓದುತ್ತಿದ್ದರು. ಅಷ್ಟೇ ಅಲ್ಲದೇ ಪೇಷ್ವೆ ಕಾಲದ ರಾಜಭಾಷೆಯಾದ ಮರಾಠಿ ತನ್ನ ರಾಜಕೀಯ ಮುದ್ರೆಯನ್ನೊತ್ತಿ ತನ್ನದೇ ಆದ ವಿಶಿಷ್ಟ ಪ್ರಭಾವವನ್ನು ಬೀರುತ್ತಿತ್ತು. ಟ್ರೇನಿಂಗ್ ಕಾಲೇಜಿಗೆ ಬರುತ್ತಿದ್ದ ಆ ಎರಡು ಪತ್ರಿಕೆಗಳನ್ನು ಗಳಗನಾಥರು ತಪ್ಪದೆ ಓದುತ್ತಿದ್ದರಲ್ಲದೆ ತಮ್ಮ ಗೆಳೆಯರೊಂದಿಗೆ ಅಲ್ಲಿನ ವಿಷಯಗಳನ್ನು ಚರ್ಚಿಸುತ್ತಿದ್ದರು. ಟಿಳಕರ ವಿಚಾರಧಾರೆ ಇವರ ಮನಸ್ಸನ್ನು ಸಂಪೂರ್ಣ ಆಕರ್ಷಿಸಿತ್ತು; ಅಷ್ಟೇ ಸತ್ತ್ವಶಾಲಿಯಾಗಿ ಆಪ್ಟೆಯವರ ಕಾದಂಬರಿಗಳನ್ನು ಕಲ್ಪನಾ ವೈಭವದ ವೈಖರಿ ಮನಸ್ಸನ್ನು ಬೆರಗುಗೊಳಿಸುತ್ತಿತ್ತು. ಆ ಭಾಗದ ಕನ್ನಡ ಜನತೆ ಮರಾಠಿ ವ್ಯಾಮೋಹದಲ್ಲಿದ್ದುದು ಆಗಲೇ ಇವರಿಗೆ ಕಂಡುಬಂದಿತು. ಟಿಳಕರ ವಿಚಾರಧಾರೆಯನ್ನೂ ಆಪ್ಟೆಯವರ ಕಾದಂಬರಿ ಕತೆಗಳನ್ನೂ ಕನ್ನಡದಲ್ಲಿಯೇ ಹೇಳಿ ಕನ್ನಡಿಗರ ವಾಚನಾಭಿರುಚಿಯನ್ನು ಬೆಳೆಸುವ ಉತ್ಕಟ ಆಶೆ ಇವರಲ್ಲಿ ಮೂಡಿತು. ಅದೇ ಕಾಲಕ್ಕೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದವರು ಕನ್ನಡ ಗ್ರಂಥಕರ್ತರಿಗೆ ಬಹುಮಾನ ಕೊಡುವ ಪರಿಪಾಠವನ್ನು ಹಾಕಿದರು. ಬಹುಮಾನದ ಸಂಗತಿ ಗಳಗನಾಥರ ಮನ ಸೆಳೆಯಿತು. ಆ ಸಂದರ್ಭದಲ್ಲಿ ಇವರು ತಮ್ಮ ಪ್ರಥಮ ಕಾದಂಬರಿ ಪ್ರಬುದ್ಧ ಪದ್ಮನಯನೆಯನ್ನು ಬರೆದರು. ಹೀಗೆ 1898ರಲ್ಲಿ ಆರಂಭವಾದ ಇವರ ಬರೆವಣಿಗೆ 1942ರ ವರೆಗೂ ಅವ್ಯಾಹತವಾಗಿ ಸಾಗಿತು. ನರೇಂದ್ರ, ಶಿರಗುಪ್ಪ, ಅಗಡಿ, ಹಾವೇರಿ ಇವು ಇವರು ನೆಲಸಿನಿಂತು ಕನ್ನಡಕ್ಕೆ ದುಡಿದ ಇತರ ಸ್ಥಳಗಳು. ಅಗಡಿಯ ಶ್ರೀ ಶೇಷಾಚಲ ಸ್ವಾಮಿಗಳು ಗಳಗನಾಥರ ಮೇಲೆ ವಿಶೇಷ ಪ್ರಭಾವವನ್ನು ಬೀರಿದರು. ಅಂತೆಯೇ ಸರ್ಕಾರಿ ಕೆಲಸದಲ್ಲಿ ಘರ್ಷಣೆ ಬಂದಾಗ ಕಾಲಕ್ಕೆ ಮೊದಲೆ ಪಿಂಚಣಿ ಪಡೆದು ಅಗಡಿಯ ಆನಂದವನದಲ್ಲಿ ನೆಲೆಸಿದರು. ಅಲ್ಲಿನ ವಾತಾವರಣ ವಿಪರೀತವಾದಾಗ ಹಾವೇರಿಗೆ ಹೋಗಿ ರಾಮದೇವರ ಗುಡಿಯ ಆವಾರವನ್ನೆ ತಮ್ಮ ಆಶ್ರಮವನ್ನಾಗಿ ಮಾಡಿಕೊಂಡು ಸುತ್ತಣ ಜನತೆಯೊಂದಿಗೆ ಬೆರೆತು ಬಾಳಿದರು. ಆನಂದವನದಲ್ಲಿದ್ದಾಗ ಸದ್ಬೋಧ ಚಂದ್ರಿಕೆ ಎಂಬ ಪತ್ರಿಕೆಯ ಮೂಲಕ ಮತ್ತು ಹಾವೇರಿಯಲ್ಲಿ ಇರತೊಟ್ಟಂದಿನಿಂದ ಸದ್ಗುರು (1919) ಎಂಬ ಪತ್ರಿಕೆಯ ಮೂಲಕ ತಮ್ಮ ಬರೆವಣಿಗೆಯನ್ನು ಪ್ರಕಟಿಸಿದರು. ಸದ್ಬೋಧ ಚಂದ್ರಿಕೆಗೆ 7000ದಷ್ಟು ವರ್ಗಣಿದಾರರು ಇದ್ದರೆಂಬುದು ನಿಜವಾಗಿಯೂ ಅಚ್ಚರಿಯ ವಿಷಯ.

	ಆದರೂ ಕಾಲ ಕಳೆದಂತೆ ಗಳಗನಾಥರ ಆದಾಯ ಇಳಿಮುಖವಾಗಹತ್ತಿ ಸಾಲ ಬೆಳೆಯತೊಡಗಿತು. ಸಾಲ ತೀರಿಸುವುದಕ್ಕಾಗಿ ಗಳಗನಾಥರು ಪುಸ್ತಕಗಳನ್ನು ಬರೆದು ಊರಿಂದೂರಿಗೆ, ಓಣಿಯಿಂದ ಓಣಿಗೆ, ಮನೆಯಿಂದ ಮನೆಗೆ, ಮಳೆಗಾಳಿ ಚಳಿಬಿಸಿಲು ಒಂದನ್ನೂ ಗಮನಿಸದೆ ತಿರುಗಿ ತಿರುಗಿ ಸೋತು ಸುಣ್ಣವಾದರು. ಸಾಲದ ಶೂಲ ನಿತ್ಯ ತಿವಿದಿತಾಗಿ ಆರೋಗ್ಯ ತೀರ ಕೆಟ್ಟು ಕ್ಯಾನ್ಸರ್ ಮೊದಲಾಯಿತು. ಗಳಗನಾಥರು ಆ ಬೇನೆಯಿಂದ ತಮ್ಮ 74ನೆಯ ವಯಸ್ಸಿನಲ್ಲಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ 1942ರ ಏಪ್ರೀಲ್ 22ರಂದು ಕೊನೆಯುಸಿರೆಳೆದರು. ಸರಳತೆ, ಅನುಕಂಪ, ಗುರಿಯನ್ನು ಸಾಧಿಸುವಲ್ಲಿ ನಿಸ್ಸೀಮ ತ್ಯಾಗ, ಉಜ್ಜ್ವಲ ಸ್ವಾಭಿಮಾನ, ಮಡಿವಂತ ಜೀವನ ಇತ್ಯಾದಿಗಳಿಗೆ ಸಂಕೇತವಾಗಿದ್ದ ಗಳಗನಾಥರು ಶುಚಿಯಾದದ್ದನ್ನೇ ನೋಡಿದರು, ಮಾಡಿದರು, ಬರೆದರು, ಪ್ರಾಥಮಿಕ ಶಾಲೆಯ ಕಿರುಬಯಲಿನಲ್ಲಿಯೇ ತಮ್ಮ ಶಕ್ತಿಯನ್ನು ಸಂಪೂರ್ಣ ವ್ಯಯಗೊಳಿಸದೆ ಅಲ್ಲಿಗೆ ಸಲ್ಲುವಷ್ಟನ್ನು ಸಲ್ಲಿಸಿ ಹೊರಜಗತ್ತಿಗೂ ಜಾಗೃತಚೇತನ ಶಕ್ತಿಯನ್ನು ಒದಗಿಸಿದರು.

	ಬಂಗಾಲಿ ಸಾಹಿತ್ಯಕ್ಕೆ ಬಂಕಿಮ್‍ಚಂದ್ರ, ಮರಾಠಿ ಸಾಹಿತ್ಯಕ್ಕೆ ಹರಿ ನಾರಾಯಣ ಆಪ್ಟೆ ಯಾವ ಬಗೆಯ ಸೇವೆಯನ್ನು ಸಲ್ಲಿಸಿದರೊ ಅದೇ ಬಗೆಯ ಸೇವೆಯನ್ನು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದವರಲ್ಲಿ ಗಳಗನಾಥರು ಒಬ್ಬ ಪ್ರಮುಖರು. ಇವರು ವಿಶೇಷವಾಗಿ ಹರಿ ನಾರಾಯಣ ಆಪ್ಟೆಯವರ ಗ್ರಂಥಗಳನ್ನು ಅನುವಾದಿಸಿ ಕೊಟ್ಟರು. ಮರಾಠೀ ಸಾಹಿತ್ಯ ಕ್ಷೇತ್ರದಲ್ಲಿ ಆಪ್ಟೆಯವರು ಯುಗಪ್ರವರ್ತಕ ಲೇಖಕರು, ಕಥಾನಕ ಪ್ರಾಧಾನ್ಯ, ವ್ಯಕ್ತಿದರ್ಶನ, ಮೂರ್ತಿಮತ್ತ ಪ್ರಸಂಗವರ್ಣನೆ, ವೈಚಿತ್ರ್ಯ ಮತ್ತು ಅದ್ಭುತಗಳ ನಿರೂಪಣೆಯಲ್ಲಿ ಪಳಗಿದ ಚಿತ್ತಾಕರ್ಷಕ ಶೈಲಿ, ಆಪ್ಟೆಯವರದು. ಆ ಶೈಲಿಯನ್ನೇ ಗಳಗನಾಥರು ಅನುಸರಿಸಿದರು. ಅನುಸರಣೆ ಇದ್ದರೂ ಅದು ಸಂಪೂರ್ಣ ಅನುಕರಣೆಯಲ್ಲ. ಒಂದು ಉದಾತ್ತವಾದ ಭಾವನೆಯಿಂದ, ದಿವ್ಯವಾದ ಆದರ್ಶದಿಂದ, ಅದ್ಭುತವಾದ ದೃಷ್ಟಿಯಿಂದ ಒಡಮೂಡಬೇಕು, ನೆಲೆನಿಲ್ಲಬೇಕು, ಬೆಳಗಬೇಕು ಎಂಬ ಹೆಗ್ಗುರಿಯಿಂದ ಗಳಗನಾಥರು ಸಾಹಿತ್ಯವನ್ನು ಸೃಜಿಸಿದರು. ಪ್ರಾಯಶಃ ಇದೇ ಕಾರಣದಿಂದ ಇವರು ಸಮಕಾಲೀನ ಚಿತ್ರವನ್ನು ಕೊಡುವ ಸಾಮಾಜಿಕ ಕಾದಂಬರಿಯನ್ನು ರಚಿಸಲಿಲ್ಲವೆಂದು ತೋರುತ್ತದೆ.

	ಗಳಗನಾಥರು ರಚಿಸಿದ ಸಾಹಿತ್ಯ ವಿಪುಲವಾದದು, ವಿವಿಧ ಮುಖವಾದುದು-24 ಕಾದಂಬರಿಗಳು, 9 ಪೌರಾಣಿಕ ಕಥೆಗಳು, 3 ಸತ್ಪುರುಷ ಚರಿತ್ರೆಗಳು (ಮಹಾಭಾರತದ 18 ಪರ್ವಗಳಲ್ಲಿ ಮೊದಲಿನ 2 ಪರ್ವಗಳು ಅಚ್ಚಾಗಿವೆ; ಮಿಕ್ಕಿನ 16 ಪರ್ವಗಳು ಅಚ್ಚಾಗಿಲ್ಲ. ಕಲಿಕುಠಾರದ 2ನೆಯ ಭಾಗ ಮತ್ತು ಬಿಚ್ಚುಗತ್ತಿಯ 2ನೆಯ ಭಾಗ ಅಚ್ಚಾಗಿಲ್ಲ.) ಮತ್ತು 8 ನಿಬಂಧಗಳು ಇಲ್ಲವೇ ಪ್ರಬಂಧಗಳು 24 ಕಾದಂಬರಿಗಳಲ್ಲಿ ಆರು ಸ್ವತಂತ್ರ, ಮಿಕ್ಕಿನವು ಅನುವಾದಿತ. ಅನುವಾದಿತ ಕಾದಂಬರಿಗಳನ್ನು ಅನುವಾದಗಳೆಂದು ಹೇಳುವುದಕ್ಕಿಂತ ರೂಪಾಂತರಗಳೆಂದು ಕರೆಯುವುದೇ ಹೆಚ್ಚು ಸಮಂಜಸ. ಕಮಲಕುಮಾರಿ ಕೃತಿಯೊಂದೇ ಶಬ್ದಶಃ ಅನುವಾದ; ಇದಕ್ಕೆ ಮೂಲ, ಆಪ್ಟೆಯವರ ಕೃತಿ ಗಡ ಆಲಾ ಪಣ ಸಿಂಹ ಗೇಲಾ (ಕೋಟಿ ಕೈವಶವಾಯಿತು ಆದರೆ ಸಿಂಹ ಹೋಯಿತು) ಎಂಬುದು. 

	ಕಾಲಾನುಕ್ರಮವಾಗಿ ಹೊರಬಂದ ಇವರ ಕೃತಿಗಳ ಪಟ್ಟಿಕೆ ಹೀಗಿದೆ:

	I. ಕಾದಂಬರಿಗಳು : (1) ಪದ್ಮನಯನೆ ಅಥವಾ ಪ್ರಬುದ್ಧ ಪದ್ಮನಯನೆ, ಸ್ವತಂತ್ರ ರಮ್ಯಾದ್ಭುತ ಕಾದಂಬರಿ. (2) ಕಮಲಕುಮಾರಿ, ಮರಾಠಿ ಇತಿಹಾಸಕ್ಕೆ ಸಂಬಂಧಪಟ್ಟ ಇದರ ಮೂಲ-ಮೇಲೆ ತಿಳಿಸಿರುವಂತೆ ಗಡ ಆಲಾ ಪಣ ಸಿಂಹ ಗೇಲಾ. (3) ಮೃಣಾಲಿನಿ ಅಥವಾ ರಾಣಿ ಮೃಣಾಲಿನಿ. ಇದು ಬಂಕಿಮ್‍ಚಂದ್ರರ ಮೃಣಾಲಿನಿ ಕೃತಿಯ ಮರಾಠಿ ಅನುವಾದದ ಅನುವಾದ. (4) ವೈಭವ. ಮೌರ್ಯರ ಇತಿಹಾಸಕ್ಕೆ ಸಂಬಂಧಪಟ್ಟಿದೆ. ಇದರ ಇನ್ನೊಂದು ಹೆಸರೇ ಚಾಣಿಕ್ಯನ ಕಾರಸ್ಥಾನ. ಇದರ ಕತೆ ಮುದ್ರಾರಾಕ್ಷಸ (ಸಂಸ್ಕøತ) ಹಾಗೂ ಕೆಂಪುನಾರಾಯಣನ ಮುದ್ರಾಮಂಜೂಷಗಳಿಂದ ಭಿನ್ನವಾಗಿದೆ. (5) ಕುಮುದಿನಿ ಅಥವಾ ಬಾಲಕ್ಕೆ ಬಡಿದಾಟ. 2ನೆಯ ಸ್ವತಂತ್ರ ಕಾದಂಬರಿ ಹಾಗೂ ಕರ್ನಾಟಕದ ಇತಿಹಾಸಕಕ್ಕೆ ಸಂಬಂಧಪಟ್ಟ ಮೊದಲ ಕಾದಂಬರಿ (1913). ಚಂದ್ರಗಿರಿಯಲ್ಲಿ ಬಾಳಿದ ವಿಜಯನಗರದ ರಾಜಮನೆತನದ ಕೊನೆಗಾಲದ ಚಿತ್ರವೇ ಇದರ ವಸ್ತು. (7) ಕ್ಷಾತ್ರತೇಜ. ಇದು ಮರಾಠೀ ಕೃತಿ ರೂಪನಗರೇಚಿ ರಾಜಕನ್ಯಾ ಎಂಬುದರ ಅನುವಾದ. ರಾಜಪುತ್ರರ ಇತಿಹಾಸಕ್ಕೆ ಸಂಬಂಧಪಟ್ಟಿದೆ. ರಜಪೂತರ ಕ್ಷಾತ್ರತೇಜಸ್ಸನ್ನೇ ಎತ್ತಿ ತೋರುತ್ತದೆ. (8) ಧರ್ಮರಹಸ್ಯ ಅಥವಾ ಸತ್ಸಮಾಗಮ ಪ್ರಭಾವ. ಇದಕ್ಕೆ ಮೂಲ ಮರಾಠಿಯ ಎರಡು ಕೃತಿಗಳು: (i) ಸಮ್ರಾಟ ಅಶೋಕ (ii) ಅಶೋಕ ಅಥವಾ ಆರ್ಯಾ ವೃತ್ತಾಂತಲಾ ಪಹಿಲಾ. ಚಕ್ರವರ್ತಿ ರಾಜಾಚಂಡಾಶೋಕ ಧರ್ಮಾಶೋಕನಾದುದೇ ಇದರ ವಸ್ತು. (9) ಸತ್ವಸಾರ ಅಥವಾ ಶೌರ್ಯಸಂಜೀವಿನಿ-ರಜಪೂತರ ಇತಿಹಾಸಕ್ಕೆ ಸಂಬಂಧಪಟ್ಟಿದೆ. ಗಳಗನಾಥರ 3ನೆಯ ಸ್ವತಂತ್ರ ಕಾದಂಬರಿಯಿದು. ಮೇವಾಡದ ಪ್ರತಾಪಸಿಂಹನ ಕತೆಯೇ ಇದರ ವಸ್ತು. (10) ತಿಲೋತ್ತಮೆ ಅಥವಾ ಸರಸ ಪ್ರೇಮ. ಅಕ್ಬರನ ಕಾಲದಲ್ಲಿದ್ದ ರಾಣಾ ಮಾನಸಿಂಗನ ಮಗ ಜಗತ್ಸಿಂಗನ ಪ್ರೇಮ ಕಥೆ. ರಜಪೂತರ ಇತಿಹಾಸಕ್ಕೆ ಸಂಬಂಧಪಟ್ಟಿದೆ. ಇಲ್ಲಿಯ ಪ್ರೇಮದಲ್ಲಿ ಸರಸಕ್ಕಿಂತ ವಿರಸವೇ ಹೆಚ್ಚು. ಗಳಗನಾಥರು ವೀರರ ಕತೆಗಳಂತೆ ಪ್ರೇಮಕಥೆಯನ್ನು ಹೇಳಲಾರರೆಂಬುದು ಇಲ್ಲಿ ವ್ಯಕ್ತವಾಗಿದೆ. (11) ಕನ್ನಡಿಗರ ಕರ್ಮಕಥೆ. ಇದು ವಿಜಯನಗರದ ಪತನವನ್ನು ಸೂಚಿಸುವ ಕಾದಂಬರಿ. ಇದಕ್ಕೆ ಮೂಲ ಮರಾಠೀಕೃತಿ ವಜ್ರಾಘಾತ. (12) ಶಿವಪ್ರಭುವಿನ ಪುಣ್ಯ. ಮರಾಠೀ ಐತಿಹಾಸಿಕ ಕಾದಂಬರಿಯ ಅನುವಾದ. ಶಿವಾಜಿಯ ಅನಂತರದಲ್ಲಿ ಆತನ ಮನೆಯಲ್ಲಿ ನಡೆದ ಘಟನೆಗಳೇ ಇದರ ವಸ್ತು. (13) ಕುರುಕ್ಷೇತ್ರ ಇದು ಪಾಣೀಪತಚಾ ಮೋಹಿಮ್ ಎಂಬುದರ ಅನುವಾದ; ಪೇಶ್ವೆಯವರ ಐತಿಹಾಸಕ್ಕೆ ಸಂಬಂಧಪಟ್ಟಿದೆ. (14) ಮರಾಠರ ಅಭ್ಯುದಯ. ಇದು ಶಿವಾಜಿ ಅಫ್‍ಜಲಖಾನನನ್ನು ಕೊಂದ ಕತೆಯನ್ನು ವಿವರಿಸುತ್ತದೆ. ಮರಾಠಿಯಿಂದ ಅನುವಾದಿತ. (15) ಛತ್ರಪತಿ. ಛತ್ರಪತಿ ಶಿವಾಜಿಯ ಕತೆಗೆ ಸಂಬಂಧಿಸಿದೆ. (16) ಮಾಧವಕರುಣವಿಲಾಸ. ಗಳಗನಾಥರ ನಾಲ್ಕನೆಯ ಸ್ವತಂತ್ರ ಕಾದಂಬರಿ. ಇದು ತಮ್ಮ ಹಿರಿಯ ಕೃತಿಯೆಂದು ಅವರೇ ಹೇಳಿಕೊಂಡಿದ್ದಾರೆ. ವಿಜಯನಗರ ರಾಜ್ಯ ಸ್ಥಾಪನೆಯ ವಿಷಯವೇ ಇದರ ವಸ್ತು. ಕನ್ನಡ ಜನತೆಯಲ್ಲಿ ಜಾಗೃತಿಯನ್ನುಂಟು ಮಾಡಿದ ಮಹಾಕೃತಿ. (17) ಗೃಹಕಲಹ. ಮರಾಠೀ ಕೃತಿಯ ಅನುವಾದ. ಮರಾಠರ ಇತಿಹಾಸಕ್ಕೆ ಸಂಬಂಧಪಟ್ಟಿದೆ. (18) ರಾಣಾ ರಾಜಸಿಂಹ. ರಜಪೂತ ಇತಿಹಾಸಕ್ಕೆ ಸಂಬಂಧಿಸಿದ ಮರಾಠೀ ಕೃತಿಯ ಅನುವಾದ. (19) ಧಾರ್ಮಿಕತೇಜ ಅಥವಾ ಪರಹಿತದಕ್ಷತಾ. ಇದೂ ರಜಪೂತರ ಇತಿಹಾಸಕ್ಕೆ ಸಂಬಂಧಿಸಿದೆ. ಬುಂದೇಲ ಖಂಡದ ರಾಜಾ ಛತ್ರಸಾಲನ ಕಥೆ. ಮರಾಠಿಯಿಂದ ಅನುವಾದಿತ. (20) ಸಂಸಾರ ಸುಖ. ಮರಾಠಿಯಿಂದ ಅನುವಾದಿತ. ಮೊಗಲರ ಇತಿಹಾಸಕ್ಕೆ ಸಂಬಂಧಪಟ್ಟಿದೆ. (21) ಸ್ವರಾಜ್ಯ ಸುಗಂಧ. ಅನುವಾದಿತ ಕೃತಿ. ಮರಾಠರ ಇತಿಹಾಸಕ್ಕೆ ಸಂಬಂಧಿಸಿದೆ. (22) ಸತ್ವಾದರ್ಶ. (23) ದುರ್ಗದ ಬಿಚ್ಚುಗತ್ತಿ. ಚಿತ್ರದುರ್ಗದ ನಾಯಕರ ಇತಿಹಾಸಕ್ಕೆ ಸಂಬಂಧಪಟ್ಟಿದೆ. ಗಳಗನಾಥರ ಐದನೆಯ ಸ್ವತಂತ್ರ ಕಾದಂಬರಿ. ಒಂದನೆಯ ಭಾಗ ಮಾತ್ರ ಅಚ್ಚಾಗಿದೆ. (24) ಭಗವತೀ ಕಾತ್ಯಾಯಿನಿ. ಪೌರಾಣಿಕ ಕಾದಂಬರಿ. ಗಳಗನಾಥರ ಆರನೆಯ ಸ್ವತಂತ್ರ ಕಾದಂಬರಿ.

	II. ಪೌರಾಣಿಕ ಕಥೆಗಳು : (1) ಗಿರಿಜಾಕಲ್ಯಾಣ (2) ಉತ್ತರರಾಮಚಂದ್ರ (3) ನಳಚರಿತ್ರ (4) ಚಿದಂಬರಚರಿತ್ರ (5) ಭಾಗವತಾಮೃತ (6) ಶೈವಸುಧಾರ್ಣವ (7) ತುಲಸೀರಾಮಾಯಣ (8) ಮಹಾಭಾರತ (ಆದಿಪರ್ವ ಮತ್ತು ಸುಭಾಪರ್ವ ಮಾತ್ರ ಅಚ್ಚಾಗಿವೆ.)

	III. ಸತ್ಪುರುಷ ಚರಿತ್ರೆಗಳು : (1) ನಿರ್ಯಾಣ ಮಹೋತ್ಸವ (2) ಸದ್ಗುರು ಪ್ರಭಾವ (3) ಕಲಿಕುಠಾರ (1ನೆಯ ಭಾಗ ಮಾತ್ರ ಅಚ್ಚಾಗಿದೆ.) 

	IV. ನಿಬಂಧಗಳು : (1) ದಾಂಪತ್ಯ (2) ಕುಟುಂಬ (3) ಸುಂದರಲೇಖ ಸಮುಚ್ಚಯ (4) ನಿಬಂಧ ಶಿಕ್ಷಣ (5) ಕನ್ಯಾಶಿಕ್ಷಣ (6) ರಾಜನಿಷ್ಠೆ (7) ಶ್ರೇಷ್ಠ ಸದುಪದೇಶ ಹಾಗೂ (8) ಬ್ರಾಹ್ಮಣ ಪ್ರಾಪ್ತಿ ಸಾಧನೆ.

	ಕಲ್ಪಕತೆ, ಭಾವೋದ್ರೇಕತೆ, ಐತಿಹಾಸಿಕ ವ್ಯಕ್ತಿಗಳ ಮೂಲಕ ವೀರಸಾಹಸರಸಿಕತೆ ಸಾಧುಸಂತರ ಪಾತ್ರಗಳ ಮೂಲಕ ಸದುಪದೇಶ-ಇವನ್ನು ಕನ್ನಡ ಜನತೆಗೆ ಗಳಗನಾಥರು ತಮ್ಮ ಹಲವಾರು ಕೃತಿಗಳ ಮೂಲಕ ಒದಗಿಸಿದ್ದಾರೆ. ಇವರ ಕೃತಿಗಳಲ್ಲಿ ಮಾನವೀಯ ಹೋರಾಟ ರಾಷ್ಟ್ರೀಯತೆಯಲ್ಲಿ ಪರ್ಯವಸಾನವಾಗಿ ಈಶ್ವರೀ ಭಾಗದತ್ತ ನಡೆಯುತ್ತದೆ. ಕೃತಿಗಳಲ್ಲಿ ಸಮಕಾಲೀನ ರಾಜಕೀಯ ಆಂದೋಲನಗಳ ಪ್ರಭಾವ ಇಲ್ಲದಿದ್ದರೂ ಸನಾತನಧರ್ಮದ ಪುನರುಜ್ಜೀವನದ ಹೆಬ್ಬಯಕೆ ಇತ್ತೆಂಬುದು ಸ್ಪಷ್ಟವಿದೆ. ಇದು ಗಳಗನಾಥರ ಜೀವನಕಾಲದ ಭಾರತೀಯ ಸಾಹಿತ್ಯದ ಲಕ್ಷಣವೇ ಆಗಿತ್ತು. ಆದುದರಿಂದ ಅವು ಆಗಿನ ಕಾಲಕ್ಕೆ ತಕ್ಕಂತೆ ಜನರ ಮನೋಧರ್ಮವನ್ನು ಸಂಸ್ಕಾರಗೊಳಿಸಿದ, ಜಾಗೃತಿಯನ್ನುಂಟುಮಾಡಿದ ಕೃತಿಗಳಾದುವು.

	ಗಳಗನಾಥರು ಸಂಸ್ಕøತ ಭಾಷೆ ಹಾಗೂ ಸಾಹಿತ್ಯಗಳಲ್ಲಿ ವಿಶೇಷ ಪ್ರೇಮವುಳ್ಳವರಾಗಿದ್ದರೂ ಸಂಸ್ಕøತ ಶಬ್ದಗಳ ಜಡಪ್ರಯೋಗಗಳಿಗೆ ಮರುಳಾಗದೆ, ಎಷ್ಟು ಬೇಕೋ ಅಷ್ಟನ್ನು ಮಾತ್ರ ತೆಗೆದುಕೊಂಡು ಅದಕ್ಕೆ ತಿರುಳ್ಗನ್ನಡ ಶಬ್ದಗಳನ್ನೂ ಕೆಲವು ಸಲ ಮನೆಮಾತುಗಳ ಪಡೆನುಡಿಗಳನ್ನೂ ಸೇರಿಗೆ ಸವ್ವಾಸೇರು ಎಂಬಂಥ ಗಾದೆಮಾತುಗಳನ್ನೂ ಬೆರೆಸಿ ಹಾಳತವಾದ ಶೈಲಿಯೊಂದನ್ನು ಸೃಷ್ಟಿಸಿದರು. ಅಷ್ಟೆ ಅಲ್ಲ ಉತ್ತರ, ಮಧ್ಯ, ದಕ್ಷಿಣ ಕನ್ನಡಗಳಿಗೆ ಸಮಾನ ಬೆಲೆ ಕೊಟ್ಟು ಎಲ್ಲರಿಗೂ ಅರ್ಥವಾಗಬಲ್ಲ ಕನ್ನಡ ಒಂದೇ ಎಂಬುದನ್ನು ತಮ್ಮ ಕೃತಿಗಳ ಮೂಲಕ ವ್ಯಕ್ತಪಡಿಸಿದರು. ಮೈಸೂರಿನ ಮಹಾರಾಜಾ ಕಾಲೇಜಿನ ಕರ್ಣಾಟಕ ಸಂಘ ಇವರಿಗರ್ಪಿಸಿದ ಮಾನಪತ್ರವೇ ಇದಕ್ಕೆ ಸಾಕ್ಷಿ. ಹೀಗೆ ಕನ್ನಡಕ್ಕೆ ಏಕರೂಪತೆಯನ್ನು ಕೊಟ್ಟವರಲ್ಲೂ ಇವರು ಆದ್ಯರಾಗಿದ್ದಾರೆ.

(ಎಸ್.ಎಸ್.ಜೆ.ಎ.;ಎನ್.ಆರ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ